ಕೊರಕೆಗಳು

ಸಮುದ್ರ ತಳದಲ್ಲಿ ಜೀವಿಸಲು ವೈಶಿಷ್ಟ್ಯ ಹೊಂದಿದ ಮೃದಸ್ಥಿ ಮೀನುಗಳ ಸಾಮಾನ್ಯ ಹೆಸರು (ಸ್ಕೇಟ್ಸ್). ಇವುಗಳ ದೇಹ ಮೇಲಿಂದ ಕೆಳಕ್ಕೆ ಚಪ್ಪಟೆಯಾಗಿದೆ. ಭುಜದ ಈಜು ರೆಕ್ಕೆಗಳು ಅಗಲವಾಗಿದ್ದು ದೇಹದ ಎಡಬಲ ಪಕ್ಕಗಳಿಗೆ ಕೂಡಿಕೊಂಡಿವೆ. ಬಾಯಿ ತಲೆಯ ತಳಭಾಗದಲ್ಲಿದೆ. ಇದರೊಳಗೆ ಮೊನಚಾದ ಅನೇಕ ಸಾಲು ಹಲ್ಲುಗಳು ವರ್ತುಲಾಕಾರದಲ್ಲಿ ಜೋಡಣೆಗೊಂಡಿವೆ. ಬಾಯಿಯ ಮುಂಭಾಗದಲ್ಲಿ ಹೊರ ನಾಸಿಕ ರಂಧ್ರಗಳು ಹಾಗೂ ಹಿಂಭಾಗದಲ್ಲಿ ಐದು ಜೊತೆ ಕಿವಿರಿನ ರಂಧ್ರಗಳು ಇವೆ. ತಲೆಯ ಮೇಲ್ಭಾಗದಲ್ಲಿ ಎರಡು ಕಣ್ಣುಗಳಿವೆ. ಒಂದೊಂದು ಕಣ್ಣಿನ ಹಾಗೂ ಹಿಂಭಾಗದಲ್ಲಿ ಸ್ಟೈರಕಲ್ ಎಂಬ ದ್ವಾರವಿದೆ. ಈ ದ್ವಾರ ಬಾಯಿಯ ಅಂಗುಳಲ್ಲಿ ತೆರೆಯುತ್ತದೆ. ಬಾಲದ ಭಾಗ ತೆಳ್ಳಗಿದ್ದು, ಚಿಕ್ಕದಾಗಿದೆ. ಕೆಲವೊಮ್ಮೆ ಚಾಟಿಯಂತೆ ಉದ್ದವಾಗಿಯೂ ಇರುವುದು. ಕೊರಕೆಗಳು ಸಮುದ್ರ ತಳದಲ್ಲಿ ನಿಧಾನವಾಗಿ ಚಲಿಸುತ್ತವೆ.				 					(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ